
ಕೆ.ಎಸ್. ಬನಶಂಕರ ಆರಾಧ್ಯರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಚಾಮರಾಜನಗರ ಜ9 ಉದಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಹಿರಿಯ ಪತ್ರಕರ್ತ ಕೆ. ಎಸ್. ಬನಶಂಕರ ಆರಾಧ್ಯರಿಗೆ ಈ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಜಿಲ್ಲೆಯ ಬೆರಳೆಣಿಕೆ ಪತ್ರಕರ್ತರಿಗೆ ಮಾತ್ರ ದೊರೆತಿದ್ದವು. ಈ ವಿಷಯದಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಈ ಬಾರಿ ಅನೇಕ ವರ್ಷಗಳ ಖಾಲಿತನ ನೀಗಿದೆ.
ರೇಷ್ಮೆನಾಡು ಮೊದಲು
ಬನಶಂಕರ ಆರಾಧ್ಯರು ಪತ್ರಿಕೆಗಳಿಗೆ ವಾಚಕರ ವಾಣಿ ಪತ್ರಗಳನ್ನು ಬರೆಯುತ್ತಿದ್ದರು. ಅವರು ಪತ್ರಿಕಾರಂಗಕ್ಕೆ ಬರುವ ಮೊದಲು ರೇಷ್ಮೆನಾಡು ಪತ್ರಿಕೆಗೆ “ಚಿತ್ತಚಿತ್ತಾರ” ಎಂಬ ಅಂಕಣ ಬರೆಯುತ್ತಿದ್ದರು. ಇದು ಯುವಜನರಲ್ಲಿ ಸಂಚಲನ ಸೃಷ್ಟಿಸಿ ಅವರಿಗೆ ಅಭಿಮಾನಿಗಳನ್ನು ಹುಟ್ಟಿಹಾಕುವಷ್ಟು ಜನಪ್ರಿಯವಾಯಿತು. ಇದೇ ಅವರನ್ನು ಪತ್ರಿಕಾ ರಂಗಕ್ಕೆ ಸೆಳೆಯಿತು. ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ಸೇರಿ ತಮ್ಮ ಛಾಪನ್ನು ಮೂಡಿಸಿದಾಗ ಅವರನ್ನು ಚಾಮರಾಜನಗರದ ಜಿಲ್ಲಾ ವರದಿಗಾರರಾಗಿ ನೇಮಿಸಲಾಯಿತು. ಅವರು ಪ್ರೀತಿಸಿದ ಯುವತಿಯ ಜೊತೆ ಆಂದೋಲನ ಸಂಪಾದಕ ಕೋಟಿಯವರೇ ನಿಂತು ಮದುವೆ ಮಾಡಿಸಿದ್ದರು.
ಅನುಭವಗಳ ಸರಮಾಲೆ
ಇವರು ಸುಮಾರು 7 ವರ್ಷಗಳ ಕಾಲ ಆಂದೋಲನ ಪತ್ರಿಕೆಯಲ್ಲಿ ಬರೆದರು. ಅದು ಪತ್ರಿಕೆಯವರಿಗೆ ಸವಾಲಿನ ದಿನಗಳಾಗಿದ್ದವು. ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ. ಏನಾದರು ವರದಿ ಮಾಡಲೇಬೇಕಾದ ಅನಿವಾರ್ಯತೆ. ಡಾ. ರಾಜ್ ಕುಮಾರ್ ಅಪಹರಣ, ನಾಗಪ್ಪ ಅಪಹರಣ ಆಗ ಕುಳಿತು ಸುದ್ದಿ ಮಾಡುವಂತಿರಲಿಲ್ಲ. ಈಗ ತಾಳವಾಡಿ, ಸತ್ಯಮಂಗಲ, ಮಹದೇಶ್ವರ ಬೆಟ್ಟ ,ಚೆಂಗಡಿ ಹೀಗೆ ಸುತ್ತಾಡಬೇಕಿತ್ತು. ಆರಾಧ್ಯರು ಇಂತಹ ಸವಾಲುಗಳನ್ನು ಎದುರಿಸಿ ಬರೆದರು. 2004-05 ರ ಒಂದು ವರ್ಷ ಅವರು ಸೂರ್ಯೋದಯ ಪತ್ರಿಕೆ ವರದಿ ಮಾಡಿದರು. 2005 ರಿಂದ 5 ವರ್ಷಗಳ ಕಾಲ ಸತತವಾಗಿ ಟಿವಿ 9 ವರದಿಗಾರರಾಗಿ ಪ್ರಿಂಟ್ ಮಿಡಿಯಾದಿಂದ ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ನೆಗೆದರು. ಅಲ್ಲಿಯ ಕೆಮಿಸ್ಟ್ರಿ ಯೇ ಬೇರೆ. ಬಿಡುವಿಲ್ಲದ ಕೆಲಸ. ಅದನ್ನು ಸಹ ಸವಾಲಾಗಿ ಸ್ವೀಕರಿಸಿ ನಿಭಾಯಿಸಿದರು. ಅದರಲ್ಲೇ ಮುಂದುವರಿಯ ಬಹುದಿತ್ತು. ವೈಯಕ್ತಿಕ ಕಾರಣಗಳಿಂದ ಬಿಟ್ಟು ಮತ್ತೆ ಪ್ರಿಂಟ್ ಮೀಡಿಯಾಗೆ ಹೊರಳಿದರು. ಕಳೆದ 14 ವರ್ಷಗಳಿಂದ ಉದಯವಾಣಿ ಪತ್ರಿಕೆಯ ಹಿರಿಯವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕಾರುಗಳ ಬಗ್ಗೆ ವಿಶೇಷ ಮೋಹ ತಮ್ಮ ಬಳಿ ಕಾರು ಇಲ್ಲದಿದ್ದರೂ ಯಾವುದೇ ಕಂಪೆನಿಯ ಕಾರುಗಳ ಚರಿತ್ರೆ ಹೇಳುವಷ್ಟು ತಿಳಿದುಕೊಂಡಿದ್ದರು. ಹಾಗೆಯೇ ಮೊಬೈಲ್ ಗಳ ಬಗ್ಗೆಯೂ ಅವರು ಅಧಿಕೃತ ವಕ್ತಾರರು. ಮೊಬೈಲ್ ಬಗ್ಗೆ ಅಂಕಣ ಸಹ ಬರೆಯುತ್ತಿದ್ದರು. ಉದಯವಾಣಿ ವರದಿಗಾರರಾಗಿ ಮುಚ್ಚಿಹೋಗಬಹುದಾದ ಕೋವಿಡ್ ಸಂದರ್ಭದಲ್ಲಿ ನಡೆದ ಆಕ್ಸಿಜನ್ ಸಾವುಗಳನ್ನು ಬೆಳಕಿಗೆ ತಂದು ಆ ಕುಟುಂಬಗಳಿಗೆ ಬೆಳಕಾದರು.
ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಎಂದೋ ಬರಬೇಕಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಈಗ ಬಂದಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಚಾಮರಾಜನಗರ ಜಿಲ್ಲೆಯ ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಕೆ.ಎಸ್.ಬನಶಂಕರ ಆರಾಧ್ಯ ರವರಿಗೆ ಅಭಿನಂದನೆಗಳು.-ರೇಷ್ಮೆನಾಡು ಬಳಗ