
ವರದಿ ಎಸ್ ಎಸ್ ಗೌಡ
ಹನೂರು. ಜುಲೈ. ೦೧. ಮಲೆ ಮಾದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಘೋರ ದುರಂತ ಸಂಭವಿಸಿರುವ ಸಂದರ್ಭದಲ್ಲಿ ಮತ್ತೊಂದು ಅಗತಕಾರಿ ವಿಷಯ ಬೆಳಕಿಗೆ ಬಂದಿದೆ ಇದೇ ಅರಣ್ಯ ವ್ಯಾಪ್ತಿಯ ಕೌದಳ್ಳಿ ವಲಯದಲ್ಲಿ ಚಿರತೆ ನಿಗೂಢ ಸಾವಿನ ಬಗ್ಗೆ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಕಚೇರಿಗೆ ಮಾಹಿತಿ ಲಭ್ಯವಾಗಿದ್ದು ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ
ಐದು ಹುಲಿಗಳು ಅಸಹಜವಾಗಿ ಮೃತಪಟ್ಟಿರುವ ಘೋರ ದುರಂತದಲ್ಲಿ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಯ ಕರ್ತವ್ಯ ಲೋಪ ನಿರ್ಲಕ್ಷದ ಬಗ್ಗೆ ಸಾರ್ವತ್ರಿಕ ಚರ್ಚೆ ಆಗುತ್ತಿರುವಾಗ ಇದೇ ಅರಣ್ಯ ವ್ಯಾಪ್ತಿಯ ಕೌದಳ್ಳಿ ವಲಯ ರಾಮಪುರ ಮತ್ತು ಮಾಟಲ್ಲಿ ಗಡಿಯಲ್ಲಿ ಕಳೆದ 15 ದಿನಗಳ ಹಿಂದೆ ಚಿರತೆಯೊಂದರ ಮೃತ ದೇಹ ಪತ್ತೆಯಾಗಿತ್ತು ಮತ್ತು ಅದರ ನಾಲ್ಕು ಕಾಲುಗಳನ್ನು ಕಡೆಯಲಾಗಿತ್ತು ಎಂಬ ಮಾಹಿತಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರ ಕಚೇರಿಗೆ ಬಂದಿರುತ್ತದೆ ಎಂಬುದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಚಿರತೆ ಉಗುರುಗಳಿಗಾಗಿ ಚಿರತೆ ಹತ್ತೆ ನಡೆದಿರುವುದು ಎಂಬ ಮಾಹಿತಿ ಇದ್ದು ಅಧಿಕಾರಿಗಳು ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂಬುದು ಅನುಮಾನಗಳನ್ನು ಹುಟ್ಟು ಹಾಕಿದೆ.
ಈ ಹಿಂದೆ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯಿಂದ ನೀಡಲಾದ ಟಿಪ್ಪಣಿಯಲ್ಲಿ ಪರಿಶಿಷ್ಟದಲ್ಲಿರುವ ಯಾವುದೇ ವನ್ಯಜೀವಿ ಮೃತಪಟ್ಟರೆ ಆಡಿಟ್ ಮಾಡಿಸಿ ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು ಆದರೆ ಇಲ್ಲಿನ ಅಧಿಕಾರಿ ವರ್ಗ ಈ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇದ್ದು, ಚಿರತೆ ಸಾವಿಗೀಡಾಗಿದೆ ಎನ್ನಲಾದ ಪ್ರಕರಣದ ಬಗ್ಗೆ ಎಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸಿ ಇದು ನಿಜವಾಗಿದ್ದಲ್ಲಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಫಾರಸ್ಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ್ ಕಂಡ್ರೆ ತಿಳಿಸಿದ್ದಾರೆ.