
ಚಾಮರಾಜನಗರ ಜೂ25 ಕೆಲದಿನಗಳ ಹಿಂದೆ ಬೇಡಗುಳಿ ಸೋಲಿಗರ ಪೋಡಿನ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದ ಹುಲಿ ಮತ್ತೊಬ್ಬನನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಇದನ್ನು ಸೆರೆ ಹಿಡಿದ ಬೆನ್ನಲ್ಲೇ ಪುಣಜನೂರು ಗ್ರಾಮದಲ್ಲಿ ಹುಲಿ ಓಡಾಟ ಕಂಡು ಬಂದಿದೆ. ಗ್ರಾಮಸ್ಥರು ಹುಲಿಯ ಹೆಜ್ಜೆ ಗುರುತು ಸೆರೆಹಿಡಿದಿದ್ದಾರೆ.
ದೂರು
ಗ್ರಾಮದ ರೈತರು ಹಗಲು ರಾತ್ರಿ ಎನ್ನದೆ ಜಮೀನು ಕೆಲಸಕ್ಕೆ ಓಡಾಡುತ್ತಾರೆ. ಶಾಲಾ ಮಕ್ಕಳು ಮಹಿಳೆಯರು ಗ್ರಾಮಸ್ಥರು ಓಡಾಡುವ ಕಡೆ ಹುಲಿ ಹೆಜ್ಜೆ ಗುರುತು ಕಂಡು ಬಂದಿರುವುದರಿಂದ ಎಲ್ಲರೂ ಭಯಭೀತರಾಗಿದ್ದಾರೆ. ಇದಲ್ಲದೆ ಹುಲಿ ಈಗಾಗಲೇ ಒಂದು ದನ, ಒಂದು ಕಡವೆ,ಒಂದು ಮೇಕೆಯನ್ನು ಬೇಟೆಯಾಡಿರುವುದು ಕಂಡು ಬಂದಿದೆ. ಪರಿಸರವಾದಿ ಪುಣಜನೂರು ದೊರೆಸ್ವಾಮಿ ಇದನ್ನು ಅರಣ್ಯ ಇಲಾಖೆ ಗಮನಕ್ಕೆ ತಂದು ಅನಾಹುತ ಆಗುವ ಮೊದಲೇ ತಕ್ಷಣ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಗೇಟಿನ ನಿವಾಸಿ ರಂಗಸ್ವಾಮಿ ನಾಯಕ ವಲಯ ಅರಣ್ಯ ಅಧಿಕಾರಿಗೆ ದೂರು ನೀಡಿ,ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.ದೂರಿನ ಬಳಿಕ ಅರಣ್ಯ ಸಿಬ್ಬಂದಿ ಹುಲಿ ಸೆರೆಗೆ ಬಲೆ ಬೀಸಿದ್ದಾರೆ.
ಹಸಿರು ಶುಲ್ಕ ಗೇಟ್ ಸ್ಥಳಾಂತರ ಮಾಡಿ
ಅರಣ್ಯ ಇಲಾಖೆಯಿಂದ ವಾಹನಗಳಿಂದ ಹಸಿರು ಶುಲ್ಕ ವಸೂಲಿ ಮಾಡುತ್ತಿರುವ ಗೇಟ್ ತುಂಬಾ ಇಕ್ಕಟ್ಟಿನ ಸ್ಥಳದಲ್ಲಿದ್ದು, ಇಲ್ಲಿ ಸಂಚರಿಸುವ ವಾಹನಗಳಿಗೆ ಅನಾನುಕೂಲವಾಗಿದೆ. ಶಾಲಾ ಮಕ್ಕಳು ಹೆದರಿ ರಸ್ತೆ ದಾಟುವ ಪರಿಸ್ಥಿತಿ ಏರ್ಪಟ್ಟಿದೆ. ಆದ್ದರಿಂದ ಇದನ್ನು ಬೇರೆ ವಿಶಾಲ ಜಾಗಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.ಇದಲ್ಲದೆ ಭಾರಿ ವಾಹನಗಳನ್ನು 7 ಗಂಟೆಯ ಮೇಲೆ ಬಿಡುವಂತಿಲ್ಲ. ಆದರೂ ಬಿಡುತ್ತಿದ್ದಾರೆ. ಇದು ನ್ಯಾಯಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮನದಟ್ಟು ಮಾಡಿದ್ದಾರೆ.