
ವರದಿ: ಎಸ್ ಎಸ್ ಗೌಡ ಹನೂರು: ಸರ್ಕಾರ 5 ಗ್ಯಾರೆಂಟಿಗಳ ನಡುವೆಯೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಮೂಲಕ ಹಲವು ಸೌಲಭ್ಯಗಳನ್ನು ನೀಡಿದೆ ಪ್ರತಿಯೊಬ್ಬ ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯವಸಾಯ ಕಷ್ಟಪಟ್ಟು ಮಾಡುವ ದುಡಿಮೆಯಾಗಿದ್ದು ರೈತರು ನಿತ್ಯ ಜಮೀನಿಗೆ ಹೋಗಬೇಕು. ಆಗೊಮ್ಮೆ- ಈಗೊಮ್ಮೆ ಜಮೀನಿಗೆ ಹೋದರೆ ಯಾವುದೇ ಆದಾಯ ಬರಲು ಸಾದ್ಯವಿಲ್ಲ. ಒಂದೆಕರೆ, ಎರಡೆಕೆರೆ ಜಮೀನಿದ್ದವರೂ ಲಕ್ಷಗಟ್ಟಲೆ ಆದಾಯ ಕಾಣಬಹುದು ಆದರೆ ನಿತ್ಯ ಜಮೀನಿಗೆ ಹೋಗಬೇಕು. ಕೂಲಿಗೆ ಹೇಳಿ ರಾಜಕೀಯ ಸಮಾರಂಭ, ಜಗಲಿ ಕಟ್ಟೆಯಲ್ಲಿ ಕೂರಬಾರದು ಎಂದರು.
ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವ ಪದ್ಧತಿಯನ್ನು ರೈತರು ಅನುಸರಿಸಬೇಕು, ಆಧುನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ನಿಮಗೆಲ್ಲಾ ಗೊತ್ತಿದೆ. ಗ್ಯಾರಂಟಿ ಬಂದು ಹಾಳಾಗೊಯ್ತು ಅಂತಾರೆ ಕೃಷಿ ಉಪಕರಣ ಕೊಡುವುದನ್ನು ನಿಲ್ಲಿಸಿದ್ದೇವಾ, ವಿಧವಾ ವೇತನ- ವೃದ್ಧಾಪ್ಯ ವೇತನ ಕೊಡುವುದನ್ನು ನಿಲ್ಲಿಸಿದ್ದೇವಾ, ಬಡ್ಡಿ ರಹಿತ ಸಾಲ ಕೊಡುವುದನ್ನು ನಿಲ್ಲಿಸಿದ್ದೇವಾ, ಬಿಜೆಪಿ ಆಡಳಿತವೂ ಗೊತ್ತು- ಕಾಂಗ್ರೆಸ್ ನ ಅಭಿವೃದ್ಧಿ ಆಡಳಿತವೂ ನಿಮಗೆ ಗೊತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಮಾತನಾಡಿ ಪ್ರತಿಯೊಬ್ಬ ರೈತರು ಹಿಂದಿನ ವ್ಯವಸಾಯ ಪದ್ಧತಿಯನ್ನು ಬಿಟ್ಟು ವೈಜ್ಞಾನಿಕವಾಗಿ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆ ಬೆಳೆಯಬೇಕು. ನಿರಂತರವಾಗಿ ಒಂದೇ ಬೆಳೆ ಬೆಳೆಯದೆ ಬೇರೆ ಬೇರೆ ಬೆಳೆ ಬೆಳೆಯಬೇಕು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರಗಳನ್ನು ಹಾಕಿ ವ್ಯವಸಾಯ ಮಾಡಬೇಕು. ಮನೆಯಲ್ಲಿರುವ ಪ್ರತಿಯೊಬ್ಬರು ವ್ಯವಸಾಯದಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯಗಳಿಸಬಹುದು. ಕೆಲವೊಮ್ಮೆ ಪ್ರಕೃತಿ ವಿಕೋಪದಿಂದ ವ್ಯವಸಾಯದಲ್ಲಿ ನಷ್ಟವಾಗಬಹುದು ಕೆಲವೊಮ್ಮೆ ಸಮರ್ಪಕ ಮಳೆಯಾಗಿ ಉತ್ತಮವಾಗಿ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.
ಶಾಸಕ ಎಂಆರ್ ಮಂಜುನಾಥ್ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರು ವ್ಯವಸಾಯವನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಹೊತ್ತು ನೀಡಿದ್ದಾರೆ. ಆದರೆ ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲದೆ ಇರುವುದರಿಂದ ತೊಂದರೆ ಆಗುತ್ತಿದೆ. ಕ್ಷೇತ್ರದ ಜನರಿಗೆ ನೀರಾವರಿ ವ್ಯವಸ್ಥೆ ಮಾಡಿಕೊಟ್ಟರೆ ಹೆಚ್ಚಿನ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಪ್ರಗತಿಪರ ರೈತ ದಯಾನಂದ ಮಾತನಾಡಿ ನಾನು ಸಹ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಹೆಚ್ಚಿನ ಬೆಳೆ ಬೆಳೆದಿದ್ದೇನೆ. ನನ್ನ ಜಮೀನಿನಲ್ಲಿ 25 ಬಗೆಯ ಮಾವು, ಹಲಸು, ನೇರಳೆ ಆಮ್ಲ ಸೇರಿದಂತೆ ಗಿಡಮೂಲಿಕೆಗಳನ್ನು ಬೆಳೆದಿದ್ದೇನೆ. ತಾವು ಸಹ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವ್ಯವಸಾಯ ಮಾಡುವಂತೆ ಸಲಹೆ ನೀಡಿದರು.
ಅದ್ದೂರಿ ಸ್ವಾಗತ: ಪಂಚೆ- ಜುಬ್ಬಾ ಧರಿಸಿ ಬಂದಿದ್ದ ಸಚಿವರಿಗೆ ಹಸಿರು ಶಾಲು ಹೊದಿಸಿ ಕೃಷಿ ಇಲಾಖೆ ಹೊದಿಸಿ ಸ್ವಾಗತ ಕೋರಿದರು. ಬಳಿಕ, ಸಚಿವರು ಎತ್ತುಗಳಿಗೆ ನಮಸ್ಕರಿಸಿ, ನೇಗಿಲು ಹಿಡಿದು ರಾಗಿ ಬಿತ್ತಿದರು. ಕೃಷಿ ಸಚಿವಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಮಂಜುನಾಥ್ ಸಾಥ್ ನೀಡಿದರು. ಬೀಜ ಬಿತ್ತನೆ ಬಳಿಕ ರೈತ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ಸಚಿವರು ವಿತರಿಸಿದರು.
ಇನ್ನು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇದೇ ಜಮೀನಿನಲ್ಲಿ ಏರ್ಪಡಿಸಿದ್ದ ಮಾವು ಮೇಳದಲ್ಲಿ 5 ನಿಮಿಷದಲ್ಲಿ ಅತಿಹೆಚ್ಚು ಮಾವುಗಳನ್ನು ತಿಂದ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು.
ಬಾಕ್ಸ್
ಬಿಜೆಪಿ ವಿರುದ್ಧ ಆಕ್ರೋಶ: ವೇದಿಕೆ ಕಾರ್ಯಕ್ರಮದ ಬಳಿಕ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಇಳಿಸುತ್ತೇವೆ ಅಂಥಾ ಯಾರು ಹೇಳಿದ್ದಾರೆ, ಬಿಜೆಪಿ ಅವರು ಕಿತಾಪತಿ ಮಾಡುತ್ತಿದ್ದಾರೆ, ನಮ್ಮಲ್ಲಿ ಹೈಕಮಾಂಡ್ ಇದೆ, ಎಲ್ಲವನ್ನೂ ಅದು ನೋಡಿಕೊಳ್ಳಲಿದೆ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲಾ,
5 ವರ್ಷ ಸರ್ಕಾರ ಇರಲಿದೆ, ಕಾಂಗ್ರೆಸ್ ನವರೇ ಮುಖ್ಯಮಂತ್ರಿ ಆಗಿರುತ್ತಾರೆ,
ಬಿಜೆಪಿ ಅವರಿಗೆ ಇದನ್ನು ತಡೆದುಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಡಿಕೆಶಿ ಶಸ್ತ್ರತ್ಯಾಗದಂತ ಮಾತಿಗೆ ಪ್ರತಿಕ್ರಿಯಿಸಿ, ಡಿಕೆಶಿ ಒಬ್ಬರು ಅಧ್ಯಕ್ಷರಿದ್ದಾರೆ, ಏನೇನೋ ಹೇಳಕ್ ಆಗಲ್ಲ, ಡಿಕೆಶಿ- ಸಿಎಂ ಅನ್ಯೂನ್ಯವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿಗಳಾದ ಸಿಟಿ ಶಿಲ್ಪಾ ನಾಗ್, ಸಿಇಒ ಮೋನೋರೋತ್, ಎಸ್ಪಿ ಡಾ ಬಿ ಟಿ ಕವಿತಾ, ಕಾಡಾ ಅಧ್ಯಕ್ಷ ಮರಿಸ್ವಾಮಿ,ಎಸಿ ಮಹೇಶ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಪ್ರಗತಿಪರ ರೈತ ದಯಾನಂದ್, ಕೃಷಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಎ ಬಿ ಪಾಟೀಲ್, ಚಾಮರಾಜನಗರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಬೀದ್, ನಿಶಾಂತ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ, ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಅಧಿಕಾರಿಗಳಾದ ಮನೋಹರ್ ನಾಗೇಂದ್ರ, ಸೇರಿದಂತೆ ಇನ್ನಿತರರು ಹಾಜರಿದ್ದರು.