You are currently viewing ಶ್ರೀ ಸುತ್ತೂರು ಜಾತ್ರಾ ಮಹೋತ್ಸವ

ಶ್ರೀ ಸುತ್ತೂರು ಜಾತ್ರಾ ಮಹೋತ್ಸವ


ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಸುತ್ತೂ ರು ಶ್ರೀ ಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಮೈಸೂರು ಭಾಗದ ವಿಭಿನ್ನ ಹಾಗೂ ವಿಶಿಷ್ಟವಾದ ಜಾತ್ರಾ ಮಹೋತ್ಸವ.
ಸುತ್ತೂರಿನಲ್ಲಿ ಆರು ದಿನಗಳ ಕಾಲ ನಡೆಯುವ ಜಾತ್ರೆ ಇಡೀ ಜೆಎಸ್ಎಸ್ ಸಂಸ್ಥಾನದ ಮಹಾ ಹಬ್ಬ ಎಂದರೆ ತಪ್ಪಾಗಲಾರದು. ಇದೊಂದು ಪರಂಪರೆಯ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಸಂಗಮ.
ಆದಿ ಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರಮುಖ ತಾಲೂಕುಗಳಲ್ಲಿ ಸಂಚರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುತ್ತದೆ.
ಕಪಿಲಾ ನದಿ ದಡದಲ್ಲಿ ನೆಲೆ ನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನ ಎಂದರೆ ತಪ್ಪಾಗಲಾರದು. ಇಲ್ಲಿ ದನಗಳ ಜಾತ್ರೆ, ಜಾನಪದ ಜಾತ್ರೆ, ಆರೋಗ್ಯ ಮೇಳ, ಕೃಷಿಮೇಳ, ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕೃತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನ ಗಾಯನ,ಸುಗಮ ಸಂಗೀತ, ಯಕ್ಷಗಾನ, ಸರ್ವಧರ್ಮ ಸಮ್ಮೇಳನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ.
ಜಾತ್ರೆಯ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆಗೆ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣ ಸ್ವಾಮಿ, ಶ್ರೀ ಶಂಕರನಾರಾಯಣ ದೇವಾಲಯಗಳಲ್ಲಿ ತ್ರಿಕಾಲಪೂಜೆ, ಮಹಾ ರುದ್ರಭಿಷೇಕ, ನವನೀತಾಲಂಕಾರ ಹಾಗೂ ಗುರು ಪರಂಪರೆಯ ಸಂಸ್ಮರಣೋತ್ಸವಗಳು ನಡೆಯುತ್ತವೆ.
ಆರು ದಿನಗಳ : ಜಾತ್ರೆ ಸುತ್ತೂರು ಜಾತ್ರೆಯು ಸುಮಾರು ಆರು ದಿನಗಳ ಕಾಲ (ಜನವರಿ 26 ರಿಂದ 31 ರ ತನಕ) ನಡೆಯಲಿದ್ದು ಒಂದೊಂದು ದಿನವೂ ಒಂದೊಂದು ರೀತಿಯ ವಿಶೇಷತೆ ಇರುತ್ತದೆ ಕಣ್ಮನ ಸೆಳೆಯುವ ಕಲಾತಂಡಗಳೊಂದಿಗೆ ಉತ್ಸವಗಳನ್ನು ಕಣ್ತುಂಬಿಕೊಳ್ಳುವುದೇ ಚೆಂದ.
ಮೊದಲ ದಿನ: ಸುತ್ತೂರಿನ ಶ್ರೀಮಠದಿಂದ ಆದಿ ಜಗದ್ಗುರು ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಕರ್ತೃ ಗದ್ದುಗೆಗೆ ತರುವುದರೊಂದಿಗೆ ಜಾತ್ರೆ ಆರಂಭಗೊಳ್ಳುತ್ತದೆ.
ಜಾತ್ರೆಯ ಎರಡನೇ ದಿನ ಸಹಸ್ರ ಕುಂಬೋತ್ಸವ
ಮೂರನೇ ದಿನ ಬೆಳಿಗ್ಗೆ ರಥೋತ್ಸವ
ನಾಲ್ಕನೇ ದಿನ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ
ಐದನೇ ದಿನ ರಾತ್ರಿ ಲಕ್ಷ ದೀಪೋತ್ಸವ ಹಾಗೂ ತೆಪ್ಪೋತ್ಸವ
ಆರನೇ ದಿನ ಅನ್ನ ಬ್ರಹ್ಮೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳು ನಡೆಯುತ್ತವೆ
ಜಾತ್ರೆ ಸಂದರ್ಭದಲ್ಲಿ ನಡೆಯುವ ಕಲಾತಂಡಗಳ ಮೆರವಣಿಗೆ ಛತ್ರಿ, ಚಾಮರ, ಸೂರಪಾನಿ, ಗಾರುಡಿ ಗೊಂಬೆ, ಮರಗಾಲು ಕುಣಿತ, ನೃತ್ಯ, ವೀರಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿಮೇಳ ನಾದಸ್ವರ ಸೇರಿ ವಿವಿಧ ಜನಪದ ಕಲಾತಂಡಗಳೊಂದಿಗೆ ಉತ್ಸವಗಳು ನಡೆಯುತ್ತವೆ

ಇತಿಹಾಸ ಪ್ರಸಿದ್ಧ ಸುತ್ತೂರು ಕ್ಷೇತ್ರ: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಕ್ಷೇತ್ರವನ್ನು ಪರಮ ತಪಸ್ಸಿದ್ಧಿಯಿಂದ ಜಾಗೃತ ಧರ್ಮ ಕ್ಷೇತ್ರವನ್ನಾಗಿ ನೆಲೆಗೊಳಿಸಿದ ಮಹಾಮಹಿಮರು ಆದಿ ಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳವರು ಪೂಜ್ಯರು ಸಂಸ್ಥಾಪಿಸಿದ ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠವು ಸಹಸ್ರಾರು ವರ್ಷಗಳಿಂದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜ್ಞಾನದಾಸೋಹಗಳ ಕೈಂಕರ್ಯವನ್ನು ನಡೆಸುತ್ತಾ ಬಂದಿದೆ. ಇಂಥ ಭವ್ಯ ಇತಿಹಾಸವುಳ್ಳ ಶ್ರೀ ಮಠದ ಎಲ್ಲಾ ಪೂಜ್ಯ ಜಗದ್ಗುರುಗಳು ಅನುಪಮ ತಪೋನುಷ್ಟಾನದಿಂದ ಸೇವ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಶ್ರೀ ಮಠದ ಬಹುಮುಖ ಚಟುವಟಿಕೆಗಳ ನಿರ್ವಹಣೆಗಾಗಿ ಶ್ರೀ ಮನ್ಮಹಾರಾಜ ರಾಜ ಗುರು ತಿಲಕ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಅದರ ಅಂಗಸಂಸ್ಥೆಗಳ ಮೂಲಕ ದೇಶ ವಿದೇಶಗಳಲ್ಲಿ ಧರ್ಮ ಸಂಸ್ಕೃತಿ ಶಿಕ್ಷಣ ಆರೋಗ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಸಮಾಜ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳು ನಡೆಯುತ್ತಿವೆ
ಆದಿ ಜಗದ್ಗುರುಗಳವರ ಜಾತ್ರಾ ಮಹೋತ್ಸವವೂ ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿ ಎಂದು ಪ್ರಾರಂಭಗೊಂಡು ಮಾಘ ಶುದ್ಧ ಬಿದಿಗೆಯವರೆಗೆ ಆರು ದಿನಗಳ ಕಾಲ ನೆರವೇರುತ್ತದೆ ಮಾಸ ಶಿವರಾತ್ರಿ ಎಂದು ರಥೋತ್ಸವ ಹಾಗೂ ಮಾಘ ಶುದ್ಧ ಪಾಡ್ಯಮಿಯಂದು ತೆಪ್ಪೋತ್ಸವ ಜರಗುತ್ತವೆ. ಈ ಸಂಭ್ರಮದ ಜಾತ್ರೆಯಲ್ಲಿ ಜನತೆಯ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಹಲವಾರು ರೀತಿಯ ವೈವಿಧ್ಯಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ.
ಜಾತ್ರೆ ಎಲ್ಲಾ ಕಾರ್ಯಕ್ರಮಗಳು ಮತ್ತು ಪೂಜಾ ಕೈಂಕರ್ಯಗಳು ಸೇವಾರ್ಥದಾರರು ಭಕ್ತಾದಿಗಳು ಸಂಘ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಾಯ ಸಹಕಾರಗಳಿಂದ ನಡೆಯುತ್ತವೆ.

Spread the love

Leave a Reply