
ರೇಷ್ಮೆನಾಡು ಪತ್ರಿಕೆ ಸಂಸ್ಥಾಪಕ ಸಂಪಾದಕ ದಿವಂಗತ ಸದಾಶಿವ ಗಟ್ಟವಾಡಿಪುರ ರವರ ಸ್ಮರಣಾರ್ಥ ನೀಡುತ್ತಿರುವ ೨೦೨೪-೨೫ ನೇ ಸಾಲಿನ ರೇಷ್ಮೆನಾಡು ಪ್ರಶಸ್ತಿಯನ್ನು ಹನೂರು ತಾಲ್ಲೋಕಿನ ಕಾಮಗೆರೆಯ ಹಿರಿಯ ಪತ್ರಿಕಾ ವಿತರಕರಾದ ಸಿ. ಸೋಮಶೇಖರ್ ರವರಿಗೆ ನೀಡಿ ಗೌರವಿಸಲಾಯಿತು.
ಸಿ.ಸೋಮಶೇಖರ್ ರವರು ಸರಿ ಸುಮಾರು 50 ವರ್ಷ ಗಳಿಂದ ಪತ್ರಿಕಾ ರಂಗದಲ್ಲಿ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 47 ವರ್ಷಗಳಿಂದ ಆಂದೋಲನ ಪತ್ರಿಕೆ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪತ್ರಿಕೆ ಪ್ರಾರಂಭದಲ್ಲಿ 15 ಪೈಸೆ ಇತ್ತು. ಪತ್ರಿಕೆಯನ್ನು ವಿತರಿಸುವಾಗ ನಡೆದುಕೊಂಡೆ ಮನೆಮನೆಗೆ ಹೋಗಿ ಹಂಚುತ್ತಿದ್ದರು. ಕಾಮಗೆರೆ ಯಿಂದ ಮಂಗಲ. ಆನಾಪುರ. ಕಣ್ಣೂರು. ಗಂಗಾಧನ್ ಕಟ್ಟೆ ಹೊಸೂರು. ಶಿವಪುರ. ಚೆನ್ನಾಲಿಂಗನಹಳ್ಳಿ ಮತ್ತು ಲೋಕನಹಳ್ಳಿ ಗ್ರಾಮಗಳಿಗೂ ನಡೆದುಕೊಂಡೇ ಹಂಚಿಕೆ ಮಾಡಲು ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆನ್ನೂ ನಿರಾಕರಿಸಿ, ಪತ್ರಿಕೆಯೇ ನನ್ನ ಜೀವನ ಎಂದು ಬದುಕಿದವರು ಸೋಮಶೇಖರ್. ಅವರಿಗೆ ತಮ್ಮ ವೃತ್ತಿಯ ಮೇಲಿರುವ ಪ್ರೀತಿ ಕೇಂದ್ರ ಸರ್ಕಾರದ ಹುದ್ದೆಯನ್ನೇ ನಿರಾಕರಿಸುವಂತೆ ಮಾಡಿತ್ತು. ಇದು ಸೋಮಶೇಖರ್ ರವರಿಗೆ ತಮ್ಮ ಪತ್ರಿಕಾ ವಿತರಣೆ ಮೇಲಿದ್ದ ಪ್ರೀತಿ ಗೌರವ ನಿಷ್ಠೆಯನ್ನ ತೋರಿಸುತ್ತದೆ.ನಂತರ ವರದಿಗಾರರಾಗಿ ಇದೇ ವೃತ್ತಿಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
72 ರ ಈ ಇಳಿ ವಯಸ್ಸಿನಲ್ಲೂ ಪ್ರತಿನಿತ್ಯ ಬೆಳಿಗ್ಗೆ 4:00ಗೆ ಎದ್ದು ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾಯಕವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.ಅವರ ಈ ಕಾಯಕ ನಿಷ್ಠೆಯನ್ನು ಪತ್ರಿಕೆ ಅಭಿನಂದಿಸುತ್ತದೆ.
