
ಶ್ರೀ ಸಾಲೂರು ಬೃಹನ್ಮಠದಲ್ಲಿ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕ ಹಾಗೂ ಪ್ರತಿಭಾ ಪುರಸ್ಕಾರ
ಮಹದೇಶ್ವರ ಬೆಟ್ಟ, ಸೆ. 9:
ಶಿಕ್ಷಕರು ಕೇವಲ ಜ್ಞಾನವನ್ನು ಬೋಧಿಸುವವರಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ, ಉತ್ತಮ ನಾಗರಿಕರನ್ನಾಗಿ ಬೆಳೆಸುವ ಮೂಲಕ ಸಮಾಜದ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ. ಆರ್. ಗಂಗಾಧರ್ ಹೇಳಿದರು.
ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿ (ರಿ.) ವತಿಯಿಂದ ಶ್ರೀ ಸಾಲೂರು ಬೃಹನ್ಮಠದಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ನಿವೃತ್ತ ನೌಕರರ ಸನ್ಮಾನ, 2026ನೇ ಸಾಲಿನ ಆದರ್ಶ ಶಿಕ್ಷಕ ಪುರಸ್ಕಾರ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣವೇ ಸಮಾಜ ಪರಿವರ್ತನೆಯ ಸಾಧನ: ಸಂದೀಪ್ ಪಟೇಲ್
ಸಮಾರಂಭವನ್ನು ಉದ್ಘಾಟಿಸಿದ ಮಣಿಪಾಲ್ ಆಸ್ಪತ್ರೆ, ಮೈಸೂರಿನ ನಿರ್ದೇಶಕ ಶ್ರೀ ಸಂದೀಪ್ ಪಟೇಲ್, ಶಿಕ್ಷಣ ಮತ್ತು ಆರೋಗ್ಯ ಸಮಾಜದ ಪ್ರಗತಿಯ ಪ್ರಮುಖ ಆಧಾರಸ್ತಂಭಗಳಾಗಿವೆ. ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಶ್ರೀಮಠದ ಸೇವೆ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಶಿಕ್ಷಣದ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲಿ: ಪೂಜ್ಯ ಶ್ರೀಗಳ ಆಶೀರ್ವಚನ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಿಕ್ಷಣವೆಂದರೆ ಕೇವಲ ಅಂಕ ಹಾಗೂ ಉದ್ಯೋಗ ಪಡೆಯುವ ಸಾಧನವಲ್ಲ; ಅದು ಜ್ಞಾನ, ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿ ಎಂದು ಆಶೀರ್ವಚನ ನೀಡಿದರು. ಶ್ರೀಮಠದ ಶಿಕ್ಷಣ ಸಂಸ್ಥೆಗಳು ಹಿಂದುಳಿದ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವ ಮೂಲಕ ಲಿಂ.ಪೂಜ್ಯ ಗುರುಗಳ ಶಿಕ್ಷಣದ ಕನಸನ್ನು ಸಾಕಾರಗೊಳಿಸುತ್ತಿವೆ. ಶಿಕ್ಷಕರು ತಮ್ಮ ಸೇವೆಯನ್ನು ಕೇವಲ ಕರ್ತವ್ಯವೆಂದು ಪರಿಗಣಿಸದೆ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಪವಿತ್ರ ಜವಾಬ್ದಾರಿಯೆಂದು ಭಾವಿಸಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ, ವಿನಯ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹಾರೈಸಿದರು.
ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಶಾಲೆಯ ಮೂಲಸೌಕರ್ಯ ಸುಧಾರಣೆಗೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಕೊಡಮಾಡುವ 2026ನೇ ಸಾಲಿನ “ಆದರ್ಶ ಶಿಕ್ಷಕ ಪುರಸ್ಕಾರ”ಕ್ಕೆ ಶ್ರೀ ಸಾಲೂರುಸ್ವಾಮಿ ಕೃಪಾ ಪ್ರೌಢಶಾಲೆ, ಪೊನ್ನಾಚಿಯ ಮುಖ್ಯಶಿಕ್ಷಕ ಶ್ರೀ ಮಹೇಶ್ ಅವರು ಪುರಸ್ಕಾರಕ್ಕೆ ಭಾಜನರಾದರು.
ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. 2025–26ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಾಲಾ, ಪದವಿಪೂರ್ವ ಹಾಗೂ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಕನ್ನಡ, ಹಿಂದಿ, ಇಂಗ್ಲೀಷ್, ವಿಜ್ಞಾನ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿ ಶ್ರೇಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನೂ ವಿಶೇಷವಾಗಿ ಪುರಸ್ಕರಿಸಲಾಯಿತು. ಇಂಗ್ಲೀಷ್ ವಿಷಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಿವೃತ್ತ ನೌಕರರಾದ ಶ್ರೀಮತಿ ಸುಗುಣ ಮತ್ತು ಖ್ಯಾತ ವಿಜ್ಞಾನಿ ಕೃಷ್ಣಪ್ರಸಾದ್ ಅವರು ಸ್ಥಾಪಿಸಿರುವ ದತ್ತಿ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಶಿಕ್ಷಕರಿಗೆ ಗೌರವ, ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಕೃತಜ್ಞತೆ, ಆದರ್ಶ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಈ ನಾಲ್ಕು ಆಶಯಗಳನ್ನು ಒಳಗೊಂಡ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು.
ಶ್ರೀಮಠದ ಸಂಸ್ಥೆಯಲ್ಲಿ ನೀಡುವ ಆದರ್ಶ ಶಿಕ್ಷಕ ಪುರಸ್ಕಾರವು ಇತರರಿಗೆ ಮಾದರಿಯಾಗಿದೆಂದು ತಿಳಿಸಿದರು.
ಶ್ರೀ ಸಾಲೂರು ಶಾಖಾ ಪಟ್ಟದ ಮಠ, ಗುಂಡೇಗಾಲದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ದಿವ್ಯ ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶ್ರೀ ಎಸ್. ಚಂದ್ರ ಪಾಟೀಲ್, ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಹಾಗೂ ಹನೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರತಿಭಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ, ನಿವೃತ್ತ ನೌಕರರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಬೇಡಗಂಪಣ ಸಮುದಾಯದವರು ಉಪಸ್ಥಿತರಿದ್ದರು.