
ವರದಿ : ಅಮಚವಾಡಿ ರಾಜೇಂದ್ರ
ಗುಂಡ್ಲುಪೇಟೆ : ಸತತ ಮೂರು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಫಾರಿ ಮರು ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ ಹಿನ್ನೆಲೆ ಬಂಡೀಪುರದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಗುರುವಾರ ಪರ ಹಾಗೂ ವಿರೋಧದ ಪ್ರತಿಭಟನೆ ನಡೆಯಿತು. ಸಾಮೂಹಿಕ ನಾಯಕತ್ವ ಹೊನ್ನೂರು ಪ್ರಕಾಶ್ ನೇತೃತ್ವದ ರೈತ ಸಂಘ ಸದಸ್ಯರು ಯಾವುದೇ ಕಾರಣಕ್ಕೂ ಸಫಾರಿ ಆರಂಭಿಸಬಾರದು ಎಂದು ಪಟ್ಟುಹಿಡಿದಿದ್ದರು ಮತ್ತೊಂದು ಕಡೆ ಸ್ಥಳೀಯರು ಸಫಾರಿ ಆರಂಭ ಮಾಡಲೇಬೇಕು ಎಂದು ಪ್ರತಿಭಟನೆಗಿಳಿದ ಘಟನೆ ನಡೆಯಿತು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ ಮಾನವ ಪ್ರಾಣಿ ಸಂಘರ್ಷ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ನಿಷೇಧಿಸಿ ಆದೇಶ ಹೊರಡಿಸಿತ್ತು ಇದಾದ ನಂತರ ವನ್ಯಜೀವಿ ಮಾನವ ಸಂಘರ್ಷ ತಪ್ಪಿಸುವಲ್ಲಿ ಯಶ ಕಂಡಿತ್ತು ಆದರೆ ರೆಸಾರ್ಟ್ ಮಾಲೀಕರ ಒತ್ತಡಕ್ಕೆ ಮಣಿದ ಅರಣ್ಯ ಸಚಿವರು ರೈತ ವಿರೋಧಿ ನೀತಿಯನ್ನ ಅನುಸರಿಸಿ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ನೀವು ಸಫಾರಿ ಆರಂಭಕ್ಕೆ ಪಣತೊಟ್ಟಿದ್ದೆಯಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ರೈತರ ನಡುವೆ ಮಾತಿನ ಚಕಮಕಿ ನಡೆಯಿತು ಎಸಿಎಫ್ ನವೀನ್ ಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡ ಪ್ರತಿಭಟನಾ ನಿರತರು ಸರ್ಕಾರದಿಂದ ಅಧಿಕೃತ ಆದೇಶ ಬರುವ ಮುಂಚೆಯೇ ಸಿದ್ಧತೆ ನಡೆಸಿರುವುದಾದರು ಯಾಕೆ ಎಂದು ಪ್ರಶ್ನಿಸಿ ರೈತರ ಹಿತಕ್ಕಿಂತ ನಿಮಗೆ ರೆಸಾರ್ಟ್ ಮಾಲೀಕರ ಮೇಲಿನ ಬಾಂಧವ್ಯವೇ ಹೆಚ್ಚಾಗಿದೆ ಎಂದು ಹರಿಹಾಯ್ದರು. ಈ ವೇಳೆ ಡಿಸಿಎಫ್ ಸ್ಥಳಕ್ಕಾಗಮಿಸುವಂತೆ ಪಟ್ಟುಹಿಡಿದ ರೈತರು ಅಹೋರಾತ್ರಿ ಧರಣಿಗೆ ಮುಂದಾಗುವುದಾಗಿ ತಿಳಿಸಿದಾಗ ಅನುಮತಿ ನಿರಾಕರಿಸಿದ ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.