You are currently viewing ಸ್ವಾತಂತ್ರ್ಯದ ದಿನದಂದೆ ಹನೂರಿನಲ್ಲಿ ಹರಿದ ನೆತ್ತರು…!ಅರಣ್ಯ ಸಿಬ್ಬಂದಿಗಳ ಗುಂಡಿನ ದಾಳಿಗೆ ಮೂವರು ಸಾವು

ಸ್ವಾತಂತ್ರ್ಯದ ದಿನದಂದೆ ಹನೂರಿನಲ್ಲಿ ಹರಿದ ನೆತ್ತರು…!ಅರಣ್ಯ ಸಿಬ್ಬಂದಿಗಳ ಗುಂಡಿನ ದಾಳಿಗೆ ಮೂವರು ಸಾವು

ಹನೂರಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಘಟನೆ
ಹನೂರು :೮೦ನೇ ಸ್ವಾತಂತ್ರೋತ್ಸವದ ದಿನದಂದೇ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ಜಿಲ್ಲಾದ್ಯಂತ ಆಘಾತ ಉಂಟು ಮಾಡಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಶನಿವಾರ ಬೆಳ್ಳಂ ಬೆಳಗ್ಗೆ ನಡೆಸಿದ ಗುಂಡಿನ ದಾಳಿಯಿಂದ ಮೂವರು ಬೇಟೆಗಾರರು ಮೃತಪಟ್ಟಿದ್ದು, ಅವರ ಮೃತದೇಹವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಗಾರರಕ್ಕೆ ರವಾನಿಸಲಾಗಿದೆ.
ಮೃತರನ್ನು ಹನೂರು ತಾಲೂಕಿನ ಮರಿಯ ಮಂಗಲದ ಆಂತೋಣಿ ಸ್ವಾಮಿ (೫೦), ಜಗನ್ನಾಥದೊಡ್ಡಿಯ ಜಾನ್ ರೋಸ್ ಪೀಟರ್ (೪೨), ಲಾಸರ್‌ದೊಡ್ಡಿಯ ಹಿಟಾಚಿ ಆಪರೇಟರ್ ಕುಮಾರ್ (೩೩) ಎಂದು ಗುರುತಿಸಲಾಗಿದೆ. ಮತ್ತೋರ್ವ ಬೇಟೆಗರ ಮರಿಯಾ ಮಂಗಲದ ಮಹಿಮದಾಸ್(೪೫) ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ವಿವರ:
ಹನೂರು ವನ್ಯಜೀವಿ ವಲಯದ ಶಾಗ್ಯ ವ್ಯಾಪ್ಯಿಯ ಹೊಳೆಮುರದಟ್ಟಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಆರು ಮಂದಿ ಬೇಟೆಗಾರರ ತಂಡ ಜಿಂಕೆಯನ್ನು ಬೇಟೆಯಾಡಿತ್ತು. ಈ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ತೆರಳಿ ಬೇಟೆಗಾರರನ್ನು ಬಂಧಿಸಲು ಮುಂದಾದರು. ಈ ವೇಳೆ ಬೇಟೆಗಾರರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ, ಆತ್ಮ ರಕ್ಷಣೆಗಾಗಿ ಅಧಿಕಾರಿಗಳು ಪ್ರತಿ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿಗೂ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಗುಂಡಿನ ದಾಳಿಯಿಂದ ಆಂತೋಣಿ ಸ್ವಾಮಿ, ಜಾನ್ ರೋಸ್ ಪೀಟರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಕುಮಾರ್ ಎಂಬಾತನನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೃತದೇಹಗಳು ಮೈಸೂರಿಗೆ ರವಾನೆ:
ಮೂವರು ಮೃತಪಟ್ಟ ವಿಷಯ ಜಿಲ್ಲಾದ್ಯಂತ ವ್ಯಾಪಕವಾಗಿ ಹರಡಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸರು ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ಬದಲು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ಗುಂಡು ಹಾರಿಸಲು ಕಾರಣವೇನು ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕೃತ ಸ್ಪಷ್ಟನೆ ನೀಡಿಲ್ಲ.

Spread the love

Leave a Reply