Rena news -Amachavadi Rajendra

ಚುಡಾದಿಂದ ಹೊಸ ಬಡಾವಣೆ ನಿರ್ಮಾಣ – ತಿರುಕನ ಕನಸು
ವರದಿ:ಅಮಚವಾಡಿ ರಾಜೇಂದ್ರ
ಚಾಮರಾಜನಗರ ಜೂ 17 ಚುಡಾಗೆ ಹೊಸ ಅಧ್ಯಕ್ಷರ ನೇಮಕವಾದಾಗಲೆಲ್ಲಾ ಅಧಿಕಾರ ವಹಿಸಿಕೊಂಡು ಕಡತಗಳಿಗೆ ಸಹಿ ಹಾಕಿದ ತಕ್ಷಣ ಅವರು ನೀಡುವ ಮೊಟ್ಟಮೊದಲ ಹೇಳಿಕೆ ಚುಡಾದಿಂದ ಹೊಸ ಬಡಾವಣೆ ನಿರ್ಮಿಸಲಾಗುವುದು ಎಂಬುದಾಗಿದೆ.ಇದೀಗ ತಾನೇ ಅಧಿಕಾರ ವಹಿಸಿಕೊಂಡ ಮಹಮ್ಮದ್ ಅಸ್ಗರ್ (ಮುನ್ನಾ) ಬಾಯಿಂದ ಇದೇ ಪುನಾರವರ್ತನೆಯಾಗಿದೆ. ಇದು ಹಳಸಲು,ಸವಕಲು ಉದ್ಘಾರವಾಗಿದೆ. ಜಿಲ್ಲೆಯಾದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೊಸ ಸರ್ಕಾರಗಳು ಬಂದವು ಹೋದವು ಹೊಸ ಸರ್ಕಾರಗಳು ಬಂದಾಗಲೆಲ್ಲಾ ಹೊಸ ಚುಡಾ ಅಧ್ಯಕ್ಷರು ನೇಮಕಗೊಂಡರು ಅಷ್ಟೇ. ಕುರ್ಚಿ ಮೇಲೆ ಕೂರುವುದು ಬಿಸಿಮಾಡುವುದು ಗೂಟದ ಕಾರಿನಲ್ಲಿ ಒಡಾಡುವುದು ಅಧಿಕಾರ ಅನುಭವಿಸುವುದು ಇದಿಷ್ಟಕ್ಕೆ ಸೀಮಿತವಾಗಿದೆ. ಈಗಿನ ಅಧ್ಯಕ್ಷರು ಕಡಿದು ಕಟ್ಟೇ ಹಾಕುತ್ತಾರೆ ಎಂಬ ಯಾವ ಭರವಸೆಯು ಇಲ್ಲ. ನಿಯಮಿತವಾಗಿ ಸಭೆಗಳಾಗುತ್ತವೆ. ಅಲ್ಲಿ ಒಂದಷ್ಟು ಅನುಷ್ಟಾನಗೊಳ್ಳದ ನಿರ್ಣಯಗಳು ಪಾಸಾಗುತ್ತವೆ. ನಗರಸಭೆಯಿಂದ ಕಟ್ಟಡದ ಪ್ಲಾನುಗಳು ಖಾಸಗಿ ಬಡಾವಣೆಯ ಪ್ಲಾನುಗಳು ಬರುತ್ತವೆ. ಚರ್ಚೆ ಆಗುತ್ತದೆ. ಅಧ್ಯಕ್ಷರು ಸಹಿಹಾಕುತ್ತಾರೆ ಮುಂದಕ್ಕೆ ಹೋಗುತ್ತದೆ.ಸಧ್ಯಕ್ಕೆ ಚುಡಾ ಇಷ್ಟಕ್ಕೆ ಸೀಮಿತಗೊಂಡಿದೆ. ಕೆಲವೊಮ್ಮೆ ಒತ್ತಡಗಳು ಬರುತ್ತವೆ. ಕಾನೂನು ಬದಿಗೊತ್ತಿ ಕಡತ ಜಾರಿಸಬೇಕಾಗುತ್ತದೆ.

ಮುಡಾಕ್ಕೆ ಹೋಲಿಕೆ ಬೇಡ
ಮೈಸೂರಿನ ಮುಡಾಕ್ಕೆ ಚುಡಾ ಹೋಲಿಕೆ ಬೇಡ. ಅದು ಬಹುದೊಡ್ಡ ಸಾಮ್ರಾಜ್ಯ. ಮೈಸೂರಿನ ಉದ್ದಗಲಕ್ಕೂ ನೂತನ ಬಡಾವಣೆಗಳು ಯೋಜಿತ ಅಭಿವೃದ್ಧಿ, ಒಂದಕ್ಕಿಂತ ಒಂದು ಅತ್ಯುತ್ತಮ ಪಾರ್ಕುಗಳು,ಉತ್ತಮ ಅಗಲವಾದ ರಸ್ತೆಗಳು ಏನುಂಟು ಏನಿಲ್ಲ? ಮುಡಾಕ್ಕೆ ಹೋಲಿಸುವುದು ಮುರ್ಖತನವಾದೀತು! ಇತರ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳು ಎಂತಹ ಅದ್ಭುತ ಪ್ರಗತಿ ಸಾಧಿಸಿವೆ. ಇದಕ್ಕೆ ಬದ್ದತೆ ಬೇಕು. ಏನಾದರೂ ಸಾಧಿಸಿ ತೋರಿಸುತ್ತೇನೆಂಬ ಛಲ ಬೇಕು. ಉಸ್ತುವಾರಿ ಸಚಿವರಿಗೂ ತಮ್ಮ ಜಿಲ್ಲೆಯ ಯೋಜನಾತ್ಮಕ ಬೆಳವಣಿಗೆಯ ಕನಸಿರಬೇಕು. ಮುಖ್ಯಮಂತ್ರಿ ಗಳು ದೃಷ್ಟಿ ಈ ಜಿಲ್ಲೆಯ ಕಡೆ ಹಾಯಿಸುವಂತೆ ಮಾಡಬೇಕು. ಅಂತಹ ದೂರದೃಷ್ಟಿ ಇಲ್ಲದಿದ್ದರೆ ಏನೇನೂ ಸಾಧಿಸಲಾಗದು.

ಯದ್ವಾತದ್ವಾ ಬೆಳವಣಿಗೆ
ಚಾಮರಾಜನಗರ ಈಗ ಅಷ್ಟ ದಿಕ್ಕುಗಳಲ್ಲೂ ಬೆಳವಣಿಗೆ ಕಾಣುತ್ತಿದೆ. ಕೈಗಾರಿಕಾ ವಲಯ ಭಾರಿ ಬೆಳವಣಿಗೆ ಹೊಂದುತ್ತಿದೆ. ವಸತಿ ಸಮಸ್ಯೆ ತಲೆದೋರಿದೆ‌. ಬೇರೆ ರಾಜ್ಯಗಳ ಕಾರ್ಮಿಕರು ದಾಂಗುಡಿ ಇಡುತ್ತಿದ್ದಾರೆ. ಮನೆ ಬಾಡಿಗೆ ಗಗನಕ್ಕೆರಿದೆ. ಮೈಸೂರಿನಲ್ಲೂ ಇಷ್ಟು ಬಾಡಿಗೆ ಇಲ್ಲ ಎಂಬ ಗೊಣಗಾಟ ಕೇಳಿ ಬರುತ್ತದೆ. ನೀವು ಯಾವುದೇ ಬಡಾವಣೆ ಒಂದು ಸುತ್ತು ಬಂದರೆ ಅವರಿಷ್ಟ ಬಂದಂತೆ ಮನೆ ಕಟ್ಟಿಕೊಂಡಿದ್ದಾರೆ. ಒತ್ತುವರಿ ಅನ್ನುವುದು ಸಾಮಾನ್ಯ ಎನ್ನುವಂತೆ ಆಗಿದೆ. ರಸ್ತೆಗೆ ಕಟ್ಟಿದ ಮನೆಯೊಂದನ್ನು ಸ್ವಾಮಿ ಬಡಾವಣೆಯಲ್ಲಿ ಕೋರ್ಟ್ ಆದೇಶದಂತೆ ಹೊಡೆದು ಉರುಳಿಸಿದ್ದು ಒಂದು ಉದಾಹರಣೆ. ಇಂತಹ ಹತ್ತಾರು ಅತಿಕ್ರಮಿತ ಮನೆಗಳನ್ನು ಕಾಣಬಹುದು.

ಕಾನೂನಿನಂತೆ ಇಲ್ಲವೇಇಲ್ಲ
ನೂತನ ಬಡಾವಣೆಗಳು, ಖಾಸಗಿ ಬಡಾವಣೆಗಳಲ್ಲಿ ನಿವೇಶನಗಳನ್ನು ಮಾಡುವಾಗ ರಸ್ತೆ,ಚರಂಡಿ ಒಳಚರಂಡಿ, ಎಲ್ಲವೂ ಯೋಜಿತ ರೀತಿಯಲ್ಲಿರಬೇಕು. ಪಾರ್ಕ್ ಸಿಎ ನಿವೇಶನ ಬಿಟ್ಟಿರಬೇಕು. ಆದರೆ ದುರ್ಬಿನು ಹಾಕಿ ಹುಡುಕಿದರೂ ಈ ನಿಯಮ ಯಾರು ಪಾಲಿಸುವುದಿಲ್ಲ.ಪಾರ್ಕಿಗೆ ಬಿಟ್ಟ ಜಾಗ ಕೆಲವೇ ದಿನಗಳಲ್ಲಿ ತಾವೇ ಕಬಳಿಸುತ್ತಾರೆ. ಇನ್ನೂ ಸಿಎ ಸೈಟು ಕನಸಿನ ಮಾತು. ನಗರ ಸಭಾ ಸದಸ್ಯರೊಬ್ಬರೇ ತಮ್ಮ ಖಾಸಗಿ ಬಡಾವಣೆಯಲ್ಲಿ ಪಾರ್ಕಿನ ಜಾಗ,ಸಿಎ ಸೈಟು ಕಬಳಿಸಿದ್ದಾರೆ. ಎಷ್ಟೋ ಬಡಾವಣೆಗಳ ನಾಗರಿಕರು ಪತ್ರಕರ್ತರು ಹೋರಾಟ ನಡೆಸಿ ಉದ್ಯಾನವನ ಉಳಿಸಿಕೊಂಡಿದ್ದಾರೆ. ಪ್ರಭಾವಿಯೊಬ್ಬರು ಬೃಹತ್ ಮನೆ ಕಟ್ಟಿಸಿ ಕಾರು ಷೆಡ್ಡನ್ನು ರಸ್ತೆಗೆ ಕಟ್ಟಿದ್ದಾರೆ.ಇವರನ್ನು ಪ್ರಶ್ನಿಸಲು ಹೋದರೆ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಅಲ್ಲಿನ ನಾಗರಿಕರು ನಮಗೆ ಯಾಕೆ ಈ ಉಸಾಬರಿ ಎಂದು ಅವಡು ಕಚ್ಚಿ ಸುಮ್ಮನಾಗುತ್ತಾರೆ ಹೀಗಾಗಿ ಒಂದು ರಸ್ತೆಯಲ್ಲಿ ಸಾಗಿದರೆ ಧುತ್ತನೆ ಒಂದು ಕಟ್ಟಡ ಎದುರಾಗುತ್ತದೆ. ಯದ್ವಾತದ್ವಾ ಮನೆಗಳನ್ನು ಕಟ್ಟಿ ರಸ್ತೆ ಎಲ್ಲಿಗೋ ತಿರುಗಿ ಮತ್ತೇಲ್ಲಿಗೋ ಹೋಗುತ್ತದೆ. ಅಧ್ಯಕ್ಷರು ವಾಸಿಸುವ ಗಾಳಿಪುರ ಬಡಾವಣೆ, ಬೀಡಿಕಾಲೋನಿ ಇತ್ಯಾದಿಗಳಂತೂ ಯಾವುದೇ ಯೋಜನೆಗೆ ಒಳಪಡದೇ ನಿರ್ಮಾಣಗೊಂಡಿವೆ. ಗುಂಡ್ಲುಪೇಟೆ ರಸ್ತೆಯ ಕ್ರಿಶ್ಚಿಯನ್ ಸ್ಮಶಾನ ನಾಲ್ಕು ಕಡೆ ಒತ್ತುವರಿಯಾಗಿದೆ. ಸುತ್ತುಗೋಡೆ ಮುಂದೆ ಅನಧಿಕೃತ ಮಳಿಗೆಗಳು ಎದ್ದಿವೆ. ದೂರು ಬರೆದರು ತೆರವುಗೊಳಿಸುತ್ತಿಲ್ಲ. ಅಲ್ಲಿ ಬೃಹತ್ ಕಟ್ಟಡಗಳು ಎದ್ದಿವೆ. ಆದರೆ ಹಾವಿನಂತೆ ಸುತ್ತಾಡುವ ಗಲ್ಲಿಗಳನ್ನು ಬಿಟ್ಟರೆ ರಸ್ತೆಗಳೇ ಇಲ್ಲ. ಅನೇಕರು ಭಾರಿ ಗಾತ್ರದ ಕಾರಿನ ಮಾಲೀಕರು. ಆದರೆ ಪಾರ್ಕಿಂಗ್ ಗೆ ಜಾಗವಿಲ್ಲ. ಇನ್ನ್ಯಾರದೋ ಜಾಗದಲ್ಲಿ ಅವರಿಗೆ ತೊಂದರೆ ಆಗುವಂತೆ ಪಾರ್ಕುಮಾಡಲಾಗುತ್ತದೆ‌. ಅನೇಕರು ದೊಡ್ಡ ಉದ್ಯಮಿಗಳು. ಅನೇಕ ಲಾರಿಗಳನ್ನು ಹೊಂದಿದ್ದಾರೆ ಗುಂಡ್ಲುಪೇಟೆ ರಸ್ತೆಯುದ್ದಕ್ಕೂ ಸುಗಮ ಸಂಚಾರಕ್ಕೆ ಅಡಚಣೆಯಾಗುವಂತೆ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಚುಡಾ ಸ್ವಲ್ಪ ಎಚ್ಚತ್ತಿದ್ದರೆ ಇಂತಹ ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿರಲಿಲ್ಲ. ಅಧ್ಯಕ್ಷರು ಮೊದಲಿಗೆ ಇಂತಹ ಅವ್ಯವಸ್ಥೆಗಳ ಕಡೆ ಗಮನಹರಿಸಲಿ. ಇನ್ನು ಮುಂದಾದರು ಅಯೋಜಿತ ಬಡಾವಣೆಗಳು ತಲೆ ಎತ್ತದಂತೆ ಕ್ರಮವಹಿಸಲಿ.ಪಟ್ಟಣದ ಒಳಭಾಗದಲ್ಲಿ ಕೆಲವು ಜಾಗಗಳು ಚುಡಾ ವ್ಯಾಪ್ತಿಗೆ ಬರದೇ ಅವರಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಅವರಿಗೆ ದಂಡವಿಧಿಸಿ ವ್ಯಾಪ್ತಿಗೆ ತರಬೇಕು. ಇ-ಸ್ವತ್ತು ಸಿಗುವಂತಾಗಬೇಕು. ಕಾನೂನುಗಳು ಕಾಗದದಲ್ಲಿದ್ದರೆ ಪ್ರಯೋಜನವಿಲ್ಲ ಅನುಷ್ಟಾನಗೊಳ್ಳಬೇಕು.

Spread the love

Leave a Reply